1831-91. ಭಾರತದ ವೈಸರಾಯ್ (1876-80), ಕವಿ, ಕಾದಂಬರಿಕಾರ, ಶ್ರೀಮಂತ, ರಾಜಕೀಯ ಮುತ್ಸದ್ದಿ, ರಾಯಭಾರ ನಿಪುಣ. ಎಡ್ವರ್ಡ್ ರಾಬರ್ಟ್ ಬಲ್‍ವರ್ ಇವನ ಪೂರ್ಣ ಹೆಸರು. ಲಂಡನ್ನಿನಲ್ಲಿ 1831 ರಂದು ಜನಿಸಿದ. ಇವನ ತಂದೆ ಎಡ್ವರ್ಡ್ ಜಾರ್ಜ್ ಲಿಟ್ಟನ್. ಇವನು ಹ್ಯಾರೋ ಮತ್ತು ಬಾನ್‍ನಲ್ಲಿ ಶಿಕ್ಷಣ ಪಡೆದು 1849 ರಲ್ಲಿ ವಾಷಿಂಗ್‍ಟನ್‍ಗೆ ತೆರಳಿದ. ಅಲ್ಲಿ ತನ್ನ ಚಿಕ್ಕಪ್ಪ ಸರ್ ಹೆನ್ರಿ ಬಲ್‍ವರ್‍ಗೆ ಇವನು ರಾಯಭಾರ ಸಂಬಂಧಿ ಆಪ್ತ ಕಾರ್ಯದರ್ಶಿಯಾಗಿ ಕೆಲಸ ಮಾಡಿದ. ಬ್ರಿಟನ್ನಿನ ವಿದೇಶಾಂಗ ಕಚೇರಿಯಲ್ಲಿ ಹುದ್ದೆ ಪಡೆದ. ಫ್ಲಾರೆನ್ಸ್, ಹೇಗ್, ಸೇಂಟ್ ಪೀಟರ್ಸ್‍ಬರ್ಗ್, ವಿಯನ್ನ ಕಾನ್‍ಸ್ಟಾಂಟಿನೋಪಲ್, ಅಥೆನ್ಸ್, ಲಿಸ್ಬನ್ ಮತ್ತು ಮ್ಯಾಡ್ರಿಡ್‍ಗಳಲ್ಲಿ ಸೇವೆ ಸಲ್ಲಿಸಿದ. 1874ರಲ್ಲಿ ಲಿಸ್ಬನ್‍ನಲ್ಲಿ ಮಂತ್ರಿಯಾದ. 1876-80ರ ಅವಧಿಯಲ್ಲಿ ಭಾರತದ ವೈಸರಾಯ್ ಆಗಿ ನೇಮಕಗೊಂಡ.

	ಇವನ ಆಡಳಿತ ಕಾಲದ ಪ್ರಮುಖ ಸೈನಿಕ ಘಟನೆಯೆಂದರೆ 2ನೆಯ ಆಪ್ಘನ್ ಯುದ್ಧ. ಬ್ರಿಟನ್ ಪ್ರಧಾನಿ ಡಿಸ್ರೇಲಿ ಇತನನ್ನು ಆಪ್ಘಾನಿಸ್ತಾನದ ಬಗೆಗೆ ಬಲವಾದ ನೀತಿ ಪಾಲಿಸಲು ನೇಮಕ ಮಾಡಿದ. ಈತ ಹಿಂದಿನವರ ತಟಸ್ಥ ನೀರಿ ಕೈಬಿಟ್ಟು ಆಕ್ರಮಣ ನೀತಿ ಅನುಸರಿಸಿದ. ಅದರಂತೆ ಅಮೀರರೊಡನೆ ಸಂಧಾನಕ್ಕೆ ಪ್ರಯತ್ನಿಸಿದ. ಅವರು ಸಂಧಾನವನ್ನು ತಿರಸ್ಕರಿಸಲಾಗಿ 1878 ನವಂಬರ್ 21ರಂದು ಆಪ್ಘಾನಿಸ್ತಾನದ ವಿರುದ್ಧ ಯುದ್ಧ ಘೋಷಿಸಿದ. ಸೋತ ಆಪ್ಘನ್ನರು ಬ್ರಿಟಿಷರೊಂದಿಗೆ 1879 ಮೇ 26ರಂದು ಗುಡ್‍ಮಕ್ ಒಪ್ಪಂದ ಮಾಡಿಕೊಂಡರು. ಇದರಿಂದ ಬ್ರಿಟಿಷರಿಗೆ ವಿಶೇಷ ಅಧಿಕಾರ ದೊರೆತರೂ ಯುದ್ಧದಿಂದ ಬ್ರಿಟಿಷ್ ಸೈನಿಕರ ಸಾವು-ನೋವು ಅಪಾರವಾಯಿತು. ಈತ ಸಾರ್ವತ್ರಿಕ ಟೀಕೆಗೆ ಒಳಗಾದ. 1876ರಲ್ಲಿ ಬ್ರಿಟಿಷ್ ಸರ್ಕಾರ ರಾಯಲ್ ಟೈಟಲ್ಸ್ ಕಾಯ್ದೆಯನ್ನು ಜಾರಿಗೆ ತಂದಿತು. 1877ರಲ್ಲಿ ಈತ ದೆಹಲಿ ದರ್ಬಾರ್ ನಡೆಸಿ ರಾಣಿಯನ್ನು ಭಾರತದ ಸಾಮ್ರಾಜ್ಞಿ ಎಂದು ಸಾರಿದ. ಕ್ಷಾಮದಿಂದ ನರಳುತ್ತಿದ್ದ ಭಾರತದಲ್ಲಿ ವೈಭವ ದರ್ಬಾರ್ ನಡೆಸಿದುದು ಭಾರತೀಯರ ದ್ವೇಷಕ್ಕೆ ಕಾರಣವಾಯಿತು. 1876-78ರ ಅವಧಿಯಲ್ಲಿ ಮದರಾಸು, ಬೊಂಬಾಯಿ, ಮೈಸೂರು, ಹೈದರಾಬಾದ್, ಪಂಜಾಬ್ ಮತ್ತು ಮಧ್ಯ ಭಾರತದ ಕೆಲವು ಭಾಗಗಳಲ್ಲಿ ತೀವ್ರ ಕ್ಷಾಮ ತಲೆದೋರಿತು. ಜೊತೆಗೆ ರೋಗ ರುಜಿನಗಳು ಕಾಡಿದವು. ಆಗ ಈತ 1878ರಲ್ಲಿ ರಿಚರ್ಡ್ ಸ್ಟ್ರಾಚಿ ನೇತೃತ್ವದ ‘ಕ್ಷಾಮ ಆಯೋಗ’ ನೇಮಿಸಿ ಅಶಕ್ತರಿಗೆ ಪರಿಹಾರ, ರೈಲ್ವೆ ನಿರ್ಮಾಣ ಮತ್ತು ಕಾಲುವೆ ಕಾಮಗಾರಿಯಿಂದ ಜನರಿಗೆ ಉದ್ಯೋಗ ಮತ್ತು ಆಹಾರ ಒದಗಿಸುವ ಕಾರ್ಯ ಕೈಗೊಂಡ. ಹಲವಾರು ಪ್ರಾಂತಗಳಲ್ಲಿ ಕ್ಷಾಮ ನಿಧಿ ಸ್ಥಾಪಿಸಿ ಕ್ಷಾಮ ಬಂದಾಗ ಹಣ ಬಿಡುಗಡೆ ಮಾಡುವ ವಿಧಾನ ಜಾರಿಗೆ ತಂದ. ಈತ ಭಾರತ ಮತ್ತು ಬ್ರಿಟನ್ನಿನ ಹಿತಾಸಕ್ತಿಗಳನ್ನು ಮನಗಂಡು ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತಂದ. ವೈಸರಾಯ್ ಆಡಳಿತ ಮಂಡಲಿಯ ಹಣಕಾಸು ಸದಸ್ಯನಾದ ಜಾನ್‍ಸ್ಟ್ರಾಚಿಯ ಸಲಹೆಯಂತೆ ದೇಶೀಯ ರಾಜ್ಯಗಳಲ್ಲಿ ವೈವಿಧ್ಯಮಯವಾ ಗಿದ್ದ ಉಪ್ಪಿನ ಕರದಲ್ಲಿ ಏಕತೆ ತಂದ. ಇದರಿಂದ ಉಪ್ಪಿನ ಕಳ್ಳಸಾಗಾಣಿಕೆ ನಿಂತು ಅಧಿಕ ಆದಾಯ ಬರುವಂತಾಯಿತು. 1877ರಲ್ಲಿ ಮುಕ್ತ ವ್ಯಾಪಾರ ನೀತಿ ಅನುಸರಿಸಿ 29 ವಸ್ತುಗಳ ಮೇಲಿನ ಆಮದು ಸುಂಕ ರದ್ದುಪಡಿಸಿದ. ಹತ್ತಿಬಟ್ಟೆ ಮೇಲಿನ ಸೇ. 5 ತೆರಿಗೆ ಮನ್ನಾ ಮಾಡಿದ. ಈತ ಆರ್ಥಿಕ ವಿಕೇಂದ್ರೀಕರಣ ನೀತಿಯನ್ನು ಮಂದುವರಿಸಿ ಪ್ರಾಂತಗಳಿಗೆ ಹೆಚ್ಚಿನ ಆಡಳಿತ ಶಾಖೆ ಮತ್ತು ಆದಾಯ ಮೂಲಗಳನ್ನು ಕೊಟ್ಟ. ಈತನ ಆಪ್ಘನ್ ನೀತಿ, ಕ್ಷಾಮ ಪರಿಹಾರ ವಿಳಂಬ ನೀತಿ ಮತ್ತು ದೆಹಲಿ ದರ್ಬಾರ್‍ಗಳನ್ನು ಭಾರತೀಯ ಪತ್ರಿಕೆಗಳು ಟೀಕಿಸಿ ಬರೆಯುತ್ತಿದ್ದವು. ಇದರ ಮೇಲೆ ನಿರ್ಬಂಧ ಹೇರಲು 1878ರಲ್ಲಿ ‘ದೇಶಭಾಷಾ ಪತ್ರಿಕಾ ಕಾಯ್ದೆ’ಯನ್ನು ಜಾರಿಗೆ ತಂದ. ಪತ್ರಿಕಾ ಸ್ವಾತಂತ್ರ್ಯದ ಮೇಲೆ ನಿರ್ಬಂಧ ಹೇರಿದ. ಇದು ಭಾರತೀಯರ ಟೀಕೆಗೆ ಒಳಗಾಯಿತು.

	ಈತ ವೈಸರಾಯ್‍ಗೆ ಸಲಹೆ ನೀಡಲು ರಾಜರುಗಳನ್ನು ಹೊಂದಿದ್ದ ‘ಪ್ರಿವಿಕೌನ್ಸಿಲ್’ ನ್ನು ಏರ್ಪಡಿಸಲು ಪ್ರಯತ್ನಿಸಿದ. ಆದರೆ ಅದು ವಿಫಲವಾಯಿತು. 1878ರಲ್ಲಿ ‘ಆಯುಧಗಳ ಕಾಯ್ದೆ’ ಜಾರಿಗೆ ತಂದು ಭಾರತೀಯರಿಗೆ ಲೈಸನ್ಸ್ ಇಲ್ಲದೆ ಆಯುಧಗಳನ್ನು ಕೊಳ್ಳುವುದು ಮತ್ತು ಮಾರುವುದು ಅಪರಾಧವೆಂದು ಘೋಷಿಸಿದ. ಆಂಗ್ಲೋ ಇಂಡಿಯನ್ನರಿಗೆ ಇದರಲ್ಲಿ ವಿನಾಯ್ತಿ ಇತ್ತು. ಈತನ ಜನಾಂಗೀಯ ಭೇದದ ಆಧಾರದ ಮೇಲೆ ರೂಪಿತವಾಗಿದ್ದ ಈ ಕಾಯ್ದೆ ಭಾರತೀಯರ ಅಸಮಾಧಾನಕ್ಕೆ ಕಾರಣವಾಯಿತು. ಈತನು ಭಾರತೀಯರನ್ನು ಉನ್ನತ ನಾಗರಿಕ ಸೇವಾ ಹುದ್ದೆಗಳಿಂದ ದೂರವಿಡಬೇಕೆಂದು 1878ರಲ್ಲಿ ‘ಸ್ಟ್ಯಾಚುಟರಿ ಸಿವಿಲ್ ಸರ್ವಿಸ್’ ನೀತಿಯನ್ನು ಜಾರಿಗೆ ತಂದ. ಬ್ರಿಟಿಷರನ್ನು ಮಾತ್ರ ಹುದ್ದೆಗೆ ನೇಮಿಸಿಕೊಳ್ಳಲಾರಂಭಿಸಿದ. ಇದು ಭಾರತೀಯರ ಅತೃಪ್ತಿಗೆ ಕಾರಣವಾಯಿತು. ಶಿಕ್ಷಣಾಭಿವೃದ್ಧಿಯ ಕಡೆಗೆ ಗಮನಹರಿಸಿ 1875ರಲ್ಲಿ ಅಲಿಘರ್ ಮಹಮಡನ್ ಆಂಗ್ಲೋ-ಓರಿಯಂಟಲ್ ಕಾಲೇಜನ್ನು ಸ್ಥಾಪಿಸಿದ. ಇದು ಮುಂದೆ ಅಲಿಘರ್ ಮುಸ್ಲಿಮ್ ವಿಶ್ವವಿದ್ಯಾಲಯವಾಗಿ ಬೆಳೆಯಿತು. ಈತನ ಎಲ್ಲಾ ಕ್ರಮಗಳೂ ಭಾರತೀಯರ ಹಿತಾಸಕ್ತಿಗೆ ವಿರುದ್ಧವಾಗಿದ್ದು, ಬ್ರಿಟಿಷ್ ಸಾಮ್ರಾಜ್ಯದ ರಕ್ಷಣೆ ಇವುಗಳ ಗುರಿಯಾಗಿತ್ತು. ಇವನ ಪ್ರತಿಗಾಮಿ ನೀತಿ ಭಾರತೀಯರ ರಾಷ್ಟ್ರೀಯ ಮನೋಭಾವನೆ ಬೆಳೆಯಲು ಕಾರಣವಾಯಿತು. ಇದಲ್ಲದೆ ಲಿಬರಲ್ ಪಕ್ಷದವರು ಮತ್ತು ಬಹುಸಂಖ್ಯಾತ ಬ್ರಿಟಿಷರು ತೀವ್ರವಾಗಿ ಟೀಕಿಸಿದರು. 1880ರಲ್ಲಿ ಈತ ಭಾರತ ಬಿಟ್ಟು ಹೋಗುವ ವೇಳೆಗೆ ಭಾರತವು ದಂಗೆಯೇಳುವ ಸ್ಥಿತಿಗೆ ತಲುಪಿತು. ಆದರೂ ದಕ್ಷತೆ, ಬುದ್ಧಿವಂತಿಕೆ, ಚತುರತೆಯಿಂದ ಕೂಡಿದ್ದ ಅವನ ಯೋಜನೆಗಳಲ್ಲಿ ಕೆಲವು ಸಫಲವಾಗಿ ಮತ್ತೆ ಕೆಲವು ವಿಫಲವಾದುವು. ಈತನನ್ನು 1887ರಲ್ಲಿ ಪ್ಯಾರಿಸ್‍ನ ರಾಯಭಾರಿಯಾಗಿ ನೇಮಿಸಲಾಯಿತು. ಅಲ್ಲಿ ಈತ ಹಲವಾರು ಕಾದಂಬರಿ ಕವಿತೆಗಳನ್ನು ಬರೆದು ಪ್ರಕಟಿಸಿ 1891ರಲ್ಲಿ ನಿಧನನಾದ.	

	(ಆರ್.ಕೆ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ